ಥೈರೋಕ್ಯಾಲ್ಸಿಟೋನಿನ್

	ಇದು ಒಂದು ಹಾರ್ಮೋನಿನ ಹೆಸರು. ಇದಕ್ಕೆ ಕ್ಯಾಲ್ಸಿಟೋನಿನ್ ಎಂಬ ಮತ್ತೊಂದು ಹೆಸರಿದೆ. ಇದು ಥೈರಾಯ್ಡ್ ಗ್ರಂಥಿಯಲ್ಲಿ ಉತ್ಪಾದನೆಯಾಗುತ್ತದೆ. ಈ ಹಾರ್ಮೋನು ರಕ್ತದಲ್ಲಿರುವ ಕ್ಯಾಲ್ಸಿಯಂ ಹಾಗೂ ಫಾಸ್ಪೇಟಿನ ಪ್ರಮಾಣವನ್ನು ನಿಯಂತ್ರಿಸುತ್ತದೆ. ಅಸ್ಥಿ ನಿರ್ಮಾಣದಲ್ಲಿ ಈ ಹಾರ್ಮೋನಿನ ಪಾತ್ರ ಗಣನೀಯ.

	ಅಸ್ಥಿ ಯಾವಾಗಲೂ ನವ ನಿರ್ಮಾಣದಲ್ಲಿ ತೊಡಗಿರುತ್ತದೆ. ಹಳೆಯ ಮೂಳೆಯನ್ನು ಅಸ್ಥಿಲಯಕ ಕೋಶಗಳು (ಆಸ್ಟಿಯೊಕ್ಲಾಸ್ಟ್ ಕೋಶ) ಕರಗಿಸುತ್ತಿರುತ್ತವೆ. ಹೊಸ ಮೂಳೆಯನ್ನು ಅಸ್ಥಿ ನಿರ್ಮಾಪಕ ಕೋಶಗಳು (ಆಸ್ಟಿಯೊಬ್ಲಾಸ್ಟ್) ಸಿದ್ಧಪಡಿಸುತ್ತಿರುತ್ತವೆ. ಥೈರೋಕ್ಯಾಲ್ಸಿಟೋನಿನ್ ಹಾರ್ಮೋನು ಅಸ್ಥಿಲಯಕ ಕೋಶಗಳ ಕಾರ್ಯವನ್ನು ನಿಗ್ರಹಿಸುತ್ತವೆ. ನಿಗ್ರಹಿಸುವುದರ ಜೊತೆಗೆ ಅಸ್ಥಿ ನಿರ್ಮಾಣ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ.

	ರಕ್ತ ಅತಿ ಕ್ಯಾಲ್ಸಿಯಂ (ಹೈಪರ್ ಕ್ಯಾಲ್ಸಿಯಂ) ಹೆಸರೇ ಸೂಚಿಸುವ ಹಾಗೆ ರಕ್ತದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುವ ಸ್ಥಿತಿ. ಇವರಿಗೆ ಥೈರೋಕ್ಯಾಲ್ಸಿಟೋನಿನ್ ನೀಡುವುದರಿಂದ ರಕ್ತದಲ್ಲಿರುವ ಅತಿ ಕ್ಯಾಲ್ಸಿಯಂ ಮೂಳೆಗಳಿಗೆ ಸಾಗಿ ಅಸ್ಥಿ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುತ್ತದೆ. ಇದರಿಂದ ಮೂಳೆ ಮೂರಿತದ ಸಾಧ್ಯತೆಯು ಕಡಿಮೆಯಾಗುತ್ತದೆ. ಪೇಜಟ್ ರೋಗದಲ್ಲೂ  ಅಸ್ಥಿ ಚಟುವಟಿಕೆಯನ್ನು ನಿಯಂತ್ರಿಸಿ ನೋವನ್ನು ಕಡಿಮೆ ಮಾಡಲು ಥೈರೋಕ್ಯಾಲ್ಸಿಟೋನನ್ನು ನೀಡುವುದುಂಟು. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ